ಪ್ರೇಯಸ್ಸು

	ಆಸೆಯನ್ನು ಪೂರೈಸಿಕೊಳ್ಳಲು ಮನುಷ್ಯ ಹಿಡಿಯುವ ಎರಡು ಹಾದಿಗಳಲ್ಲಿ ಒಂದು ಇನ್ನೊಂದು ಶ್ರೇಯಸ್ಸು. ಇವೆರಡೂ ಬೇರೆ ಬೇರೆ. ಎರಡೂ ಮನುಷ್ಯನನ್ನು ಬಂಧಿಸುತ್ತವೆ. ಶ್ರೇಯಸ್ಸಿನಿಂದ ಸದ್ಗತಿ. ಪ್ರೇಯಸ್ಸಿನಿಂದ ದುರ್ಗತಿ.

	ಸಂತೃಪ್ತ ಬದುಕನ್ನು ನಡೆಸಲು ಬಯಸುವವನಿಗೆ ಶಾಸ್ತ್ರದ ತಿಳಿವಳಿಕೆ ಇರಬೇಕು. ಪ್ರಧಾನವಾಗಿ, ಕಿವಿ ಕೇಳಿದುದನ್ನು ಕಣ್ಣು ಕಾಣುವುದು ಶಾಸ್ತ್ರ. ಯುಕ್ತಿ, ಅನುಭವಗಳು ಶಾಸ್ತ್ರವನ್ನು ಗ್ರಹಿಸಲು ಸಹಾಯ ಮಾಡುತ್ತವೆ. ಶ್ರದ್ಧೆ ಇದ್ದ ಹೊರತೂ ಶಾಸ್ತ್ರವನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಧೈರ್ಯ, ಸೌಜನ್ಯಾದಿಗಳು ಶ್ರದ್ಧೆ ಇದ್ದವನಲ್ಲಿ ಇರುತ್ತವೆ. ಪ್ರೇಯೋಮಾರ್ಗವನ್ನು ಹಿಡಿದವನಿಗೆ ಶಾಸ್ತ್ರ ಮತ್ತು ಶ್ರದ್ಧೆಯ ಬಗ್ಗೆ ಸರಿಯಾದ ತಿಳಿವಳಿಕೆ ಇರುವುದಿಲ್ಲವಾದ್ದರಿಂದ ತನ್ನ ಗುರಿಯನ್ನು ಮುಟ್ಟಲು ಅವನು ತನಗೆ ತೋರಿದ ಹಾದಿಯನ್ನು ಅನುಸರಿಸುತ್ತಾನೆಯೇ ವಿನಾ ಹೋಗಬೇಕಾದ ಹಾದಿಯಲ್ಲಿ ಹೋಗುವುದಿಲ್ಲ.

	ಮನುಷ್ಯನಿಗೆ ಅಂತರಂಗ, ಬಹಿರಂಗಗಳೆಂದು ಎರಡು ಮುಖಗಳುಂಟು. ಅಂತರಂಗ ಶುದ್ಧಿಯಾಗದ ಹೊರತು ಸರಿಯಾದ ಹಾದಿ ಕಾಣುವುದಿಲ್ಲ. ನಾಡಿಗಳ ಕಶ್ಮಲವನ್ನು ತೆಗೆದು ಹಾಕುವುದು, ಮನಸ್ಸಿನ ಚಪಲತೆಯನ್ನು ಕಳೆದುಕೊಳ್ಳುವುದು, ಅಹಂಕಾರವನ್ನು ಸಾತ್ತ್ವಿಕಗೊಳಿಸುವುದು-ಇವುಗಳಲ್ಲಿ ಅಂತರಂಗದ ಶುದ್ಧಿ ಅಡಗಿದೆ. ಪ್ರೇಯೋಮಾರ್ಗವನ್ನು ಹಿಡಿದವನಿಗೆ ಅಂತರಂಗಶುದ್ಧಿಯ ಪರಿವೆಯೇ ಇರುವುದಿಲ್ಲ. ತನ್ನ ಆಸೆಯನ್ನು ಪೂರೈಸುವ ದೇವತೆಯನ್ನು ಪ್ರತ್ಯೇಕವಾಗಿ ಆರಾಧಿಸಿ ಯಾವ ರೀತಿಯಿಂದಲಾದರೂ ದೇವತೆಯಿಂದ ತನ್ನ ಆಸೆ ಪೂರೈಸಿಕೊಂಡರೆ ಸಾಕು ಎಂಬ ಮನೋಭಾವನೆ ಅವನಿಗಿರುತ್ತದೆ. ಒತ್ತಾಯದಿಂದ ಪಡೆದುದರ ಮಿತಿಗಳ ಅರಿವು ಅವನಿಗಿರುವುದಿಲ್ಲ.

ಸರಿಯಾದ ಆಹಾರ ಆಚಾರ ಸಂಸ್ಕಾರ ಮಾತ್ರಾಶಿಷ್ಟತೆ ಪಿತ್ರಾಶಿಷ್ಟತೆ ಗುರ್ವಾಶಿಷ್ಟತೆ ಯೋಗ್ಯರ ಸ್ನೇಹ ದೇವತೆಗಳ ಒಲುಮೆಗಳು ಮಾತ್ರ ನಾಡಿಶುದ್ಧಿ ಪ್ರಾಣಶುದ್ಧಿ ಕರ್ಮಶುದ್ಧಿಗಳಿಗೆ ಅವಕಾಶ ಮಾಡಿಕೊಡುವುದರ ಮೂಲಕ ಆತ್ಮೋದ್ಧಾರಕ್ಕೆ ಲೋಕೋದ್ಧಾರಕ್ಕೆ ಸಹಾಯಕವಾಗುತ್ತದೆ. ಪ್ರೇಯೋಮಾರ್ಗಾವಲಂಬಿಗೆ ತನ್ನ ಹೊರತಾಗಿ ಮತ್ತಾರೂ ದೊಡ್ಡವರಾಗಿ ಕಾಣುವುದಿಲ್ಲ. ತನ್ನ ದೊಡ್ಡತನವನ್ನು ಮೆರೆಯುವ ಅವಕಾಶವನ್ನು ದೇವತೆಯಿಂದ ಪಡೆಯುವವರೆಗೆ ಮಾತ್ರ ದೇವತೆಯ ಗುರುತ್ವವನ್ನು ಆತ ಒಪ್ಪಿಕೊಳ್ಳುತ್ತಾನೆ. ಅನಂತರ ಆಹಾರ ಆಚಾರ ಸಂಸ್ಕಾರ ಇತ್ಯಾದಿಗಳ ವಿಷಯದಲ್ಲಿ ಯಾವ ಲಕ್ಷ್ಯವನ್ನೂ ತೋರಿಸುವುದಿಲ್ಲ.

	ಸತ್ಯ ಎಂಬುದು ಕ್ಷರ-ಅಕ್ಷರಗಳೆರಡು ಆಗಿದೆ. ಕರ್ತೃತ್ವ ಅಹಂಕಾರ, ದ್ವೇಷ ಪಂಚಭೂತಗಳ ಸಂಘಾತ-ವಿಘಾತಗಳ ಕ್ರಿಯೆ, ಕಾಲದ ಗತಿಗಳು ಅಕ್ಷರನ ಮೇಲೆ ಕೆಲಸ ಮಾಡುತ್ತಿರುತ್ತವೆ. ಈ ಪಾಶಗಳಿಂದ ಬಿಡಿಸಿಕೊಳ್ಳುವವ ಮಾತ್ರ ಅಕ್ಷರ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಂಡು ಸಂತೃಪ್ತ ಜೀವನವನ್ನು ನಡೆಸಬಲ್ಲ. ಪ್ರೇಯೋಮಾರ್ಗಿ ಈ ಪಾಶಗಳ ಹೊಡೆತಕ್ಕೆ ಸದಾಕಾಲ ಗುರಿಯಾಗುತ್ತಾನೆ. ಏಕೆಂದರೆ ಅವನಿಗೆ ಭೋಗ ಇಂದ್ರಿಯಗಳ ತೇಜಸ್ಸನ್ನು ಅಪಹರಿಸುತ್ತದೆ; ಪಂಚಭೂತಗಳಲ್ಲಿ ದೇಹ ಲಯವಾಗುತ್ತದೆ; ದೇಹಕ್ಕೆ ಮಿತಿಗಳಿವೆ; ಮನಸ್ಸು ಅಹಂಕಾರ, ದ್ವೇಷ, ವ್ಯಾಮೋಹ, ಅತೃಪ್ತಿಗಳ ನೆಲೆವೀಡು, ಕರ್ಮ, ಕರ್ಮಗಳೂ ಜ್ಞಾನವಾಗಬೇಕು. ಹಾಗಾಗಲು ಅವು ಕಾಮೋದ್ದೇಶರಹಿತವಾಗಿ ಅಖಿಲವಾಗಬೇಕು; ದೇಹಾಭಿಮಾನ, ನಿರಾಕರಣೆ ಭೋಗ ನಿರಾಕರಣೆ, ಪ್ರತ್ಯೇಕ ದೇವತೆಗಳನ್ನು ಏಕೀಕರಿಸುವುದು, ದೇವತೆಗಳು ಉಪಾಸಕನನ್ನು ತನ್ನ ಉಪಾಸಕ ಎಂದು ಒಪ್ಪಿಕೊಳ್ಳುವುದೇ ಮೊದಲಾದವುಗಳ ತಿಳಿವಳಿಕೆ ಅಮೃತ-ಆನಂದರೂಪಿ ಅಕ್ಷರನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಹಾಯ ಮಾಡುವುದು ಎಂಬುದರ ಕಲ್ಪನೆಯೇ ಅಂಥವನಿಗೆ ಇರುವುದಿಲ್ಲ. ಹೀಗಾಗಿ ಪ್ರೇಯೋಮಾರ್ಗಿ ದೇವತಾಮಯ ಶರೀರವನ್ನು ಪಡೆಯಲಾಗದೆ, ಯೋಗ್ಯಾ ಯೋಗ್ಯ ಕಾರ್ಯಗಳನ್ನು ಪ್ರತ್ಯೇಕಿಸಲಾರದೆ ತನಗೆ ತಕ್ಕದ್ದು-ತಕ್ಕುದಲ್ಲದು ಯಾವುದು ಎಂದು ಗುರುತಿಸಲಾಗದೆ ಶಾಶ್ವತ ಸಂಗತಿಗಾಗಿ ಆತ್ಮವಿನಿಯೋಗ ಮಾಡಿಕೊಳ್ಳಲಾಗದೆ, ಪಂಚಭೂತಗಳನ್ನು ಮೀರಲಾಗದೆ. ಕಾಲ-ದೇಶ-ವರ್ತಮಾನಗಳ ಪ್ರಸನ್ನತೆಯನ್ನು ಪಡೆಯಲಾಗದೆ, ಬ್ರಹ್ಮೋಪಾಸನೆ ಮಾಡಿದರೂ ಅಹಂಕಾರದಿಂದ ಮುಕ್ತನಾಗದೆ ಆತ್ಮೋದ್ಧಾರ-ಲೋಕೋದ್ಧಾರ-ಅಕ್ಷರ ಸ್ವರೂಪ ಸಾಕ್ಷಾತ್ಕಾರಗಳಾವುದನ್ನು ಸಾಧಿಸಲಾಗದೆ ಅಸಂತೃಪ್ತ ಜೀವನವನ್ನು ನಡೆಸುತ್ತಾನೆ.										(ಪಿ.ಎಚ್.ಇ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ